ಸೋಮೇಶ್ವರ ದೇವಾಲಯದ ಸಂಕೀರ್ಣವು ವಿವಿಧ ಪವಿತ್ರ ಮರಗಳನ್ನು ಹೊಂದಿದೆ. ಫಿರಂಗಿ ಮರ ಅಥವಾ ನಾಗ ಲಿಂಗ ಮರವು (ಕೌರೊಪಿಟಾ ಗಯಾನೆನ್ಸಿಸ್), ದಕ್ಷಿಣ ಅಮೆರಿಕಾದ ಸ್ಥಳೀಯ ಮರವಾಗಿದೆ. ಹೂವುಗಳು ಶಿವಲಿಂಗವನ್ನು ರಕ್ಷಿಸುವ ಪವಿತ್ರ ಹಾವಾದ ನಾಗನ ಹೆಡೆಯನ್ನು ಹೋಲುವುದರಿಂದ, ಇದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಔಷಧೀಯ ಮೌಲ್ಯಗಳನ್ನು ಹೊಂದಿರುವುದರ ಜೊತೆಗೆ, ಆಲದ ಮರವನ್ನು (ಫೈಕಸ್ ರಿಲಿಜಿಯೋಸ) ಹಿಂದೂ, ಜೈನ ಹಾಗೂ ಬೌದ್ಧ ಧರ್ಮಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಬೋಧಿಯೆಂದೂ ಕರೆಯಲ್ಪಡುವ ಈ ಮರದ ಅಡಿಯಲ್ಲೇ ಬುದ್ಧನಿಗೆ ಜ್ಞಾನೋದಯವಾಯಿತೆಂಬ ನಂಬಿಕೆ ಇದೆ. ಬಿಲ್ವ ಮರವು (ಏಗಲ್ ಮಾರ್ಮೆಲೋಸ್) ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಗ್ನೇಯ ಏಷ್ಯಾದಲ್ಲಿ ಬೆಳೆಯುತ್ತದೆ. ಶಿವನಿಗೆ ಈ ಮರದ ಬಗ್ಗೆ ಒಲವು ಇರುವುದರಿಂದ, ಅನೇಕ ಶಿವ ದೇವಾಲಯಗಳಲ್ಲಿ ಈ ಮರ ಇರುತ್ತದೆ. ತ್ರಿಪರ್ಣಕ ಎಲೆಗಳನ್ನು (ಮೂರು ಎಲೆಗಳ ಸಣ್ಣ ತೆಳು ರೆಂಬೆಯನ್ನು) ಹೊಂದಿದ ಮರದ ಎಲೆಗಳು ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುತ್ತವೆ. ಈ ಮರವನ್ನು ಕಲ್ಲಿನ ಸೇಬು/ಮರಸೇಬು ಅಥವಾ ಬೇಲದ ಮರವೆಂದೂ ಕರೆಯುತ್ತಾರೆ.