ಮಧ್ಯಕಾಲೀನ ಭಾರತದಲ್ಲಿನ ದೇವಾಲಯ ಪಟ್ಟಣಗಳಲ್ಲಿ ವಿವಿಧ ಪಂಗಡಗಳು ಮತ್ತು ವಂಶಾವಳಿಗಳಿಗೆ ಸೇರಿದ ಅಲೆದಾಡುವ ತಪಸ್ವಿಗಳನ್ನು ಕಾಣುವುದು ಬಹಳ ಸಾಮಾನ್ಯವಾದ ದೃಶ್ಯವಾಗಿತ್ತು. ಹಲಸೂರು ಸೋಮೇಶ್ವರ ದೇವಾಲಯದ ಕಂಭಗಳು ಮತ್ತು ಗೋಡೆಗಳು ನಿಜದಲ್ಲಿ ವಿಜಯನಗರ ಕಾಲದ ಶೈವ ತಪಸ್ವಿಗಳ ವಿಶ್ವಕೋಶದಂತಿವೆ - ತಮ್ಮ ಜಟೆಯನ್ನು ಗಂಟಿನಂತೆ ಸುತ್ತಿದ ದುಂಡಗಿನ ಋಷಿಗಳು; ಉದ್ದ ಕೂದಲಿನ ಆಚಾರ್ಯರು ಮಾಡುತ್ತಿರುವ ಧ್ಯಾನ ಮತ್ತು ಬೋಧನೆ; ನೃತ್ಯ, ತಾಳ-ಮದ್ದಳೆಗಳು, ತುತ್ತೂರಿ-ಕೊಂಬು ವಾದ್ಯಗಳನ್ನು ಊದುತ್ತಿರುವ ಭಾವಪರವಶ ತಪಸ್ವಿಗಳು; ವಿಚಿತ್ರವಾದ ವೇಷಭೂಷಣಗಳನ್ನು ಧರಿಸಿದ ಬೈರಾಗಿಗಳು ಮತ್ತು ಯೋಗಪಟ್ಟದೊಂದಿಗೆ ಹಿಮ್ಮಡಿಯ ಮೇಲೆ ಕುಳಿತ ಅಥವಾ ತಿರುಚಿದ ಆಸನಗಳಲ್ಲಿ/ಭಂಗಿಗಳಲ್ಲಿ ಸುಲಭವಾಗಿ ಬಾಗಿರುವ ಯೋಗಿಗಳು; ಮತ್ತು ಇನ್ನೂ ಅನೇಕ ಬಗೆಯ ಶಿಲ್ಪಗಳಿವೆ.