ದೇವಾಲಯದ ಕಂಭಗಳು ಮತ್ತು ಗೋಡೆಗಳ ಮೇಲೆ ಮತ್ತು ಅದರ ಗೋಪುರ ಮತ್ತು ವಿಮಾನದ ಮೇಲೆ, ದೇವರು ಮತ್ತು ಮನುಷ್ಯರೊಂದಿಗೆ ಪ್ರಾಣಿಗಳು ಬೆರೆಯುತ್ತವೆ. ವಿವಿಧ ಭಂಗಿಗಳಲ್ಲಿ ಕುಳಿತಿರುವ ಹೆಚ್ಚು ಶೈಲೀಕೃತ ಚಿತ್ರಿಸಿರುವ ಸಿಂಹಗಳ ಸರಣಿಯು ಬಹುತೇಕ ಮಂಟಪ ಸ್ತಂಭಗಳ ತಳವನ್ನು ಆಕ್ರಮಿಸಿಕೊಂಡಿದೆ. ಗವುಸು ಹೊದ್ದ, ಸಿಂಗಾರಗೊಂಡ ಆನೆಗಳು ತಮ್ಮ ಸೊಂಡಿಲುಗಳನ್ನು ಮೇಲಕ್ಕೆತ್ತಿ, ಶಿಸ್ತಿನ ನಡಿಗೆ ನಡೆಯುತ್ತಾ, ಕುಣಿದಾಡುತ್ತ ನಡೆಯುತ್ತಿವೆ - ಈ ದೇಗುಲದಲ್ಲಿ ಯಾವುದೇ ಕಾಡು ಆನೆಗಳನ್ನು ಚಿತ್ರಿಸಲಾಗಿಲ್ಲ. ಸಿಂಹವೊಂದು ಮಂಟಪವೊಂದರ ಸ್ತಂಭದ ಮೇಲೆ ಮಾನವನ ಮೇಲೆ ಎರಗಿ ದಾಳಿ ಮಾಡಿದೆ. ಮತ್ತೊಂದು ಕಂಭದ ಮೇಲೆ, ಬೇಟೆಗಾರನು ತಾನು ಬೇಟೆಯಾಡಿದ ಎರಡು ಸತ್ತ ಮೊಲಗಳನ್ನು ಕೋಲಿನ ಆಚೀಚೆ ಬದಿಗೆ ಬಿಗಿದು, ಅದನ್ನು ತನ್ನ ಭುಜದ ಮೇಲೆ ಹೊತ್ತು ಹೋಗುತ್ತಿರುವುದನ್ನು ನೋಡಬಹುದು. ಶಾಂತವಾಗಿ ಕುಳಿತ, ಹಣ್ಣುಗಳನ್ನು ತಿನ್ನುತ್ತಿರುವ, ಒಗಟಿನಲ್ಲಿ ಬೆರೆತಂತೆ, ಹಂಚಿದ ತಲೆ ಮತ್ತು ದೇಹಗಳನ್ನು ಹೊಂದಿದಂತೆ ಕಾಣುವ ಹಲವಾರು ಕಾಡು ಕೋತಿಗಳನ್ನು ಚಿತ್ರಿಸಲಾಗಿದೆ, ಭವ್ಯವಾದ ಟಗರು ಕಂಭದ ಮುಖವನ್ನು ಅಲಂಕರಿಸಿದೆ. ಹಾವುಗಳು ಮತ್ತು ಆನೆಗಳು ಲಿಂಗವನ್ನು ರಕ್ಷಿಸಿ, ಪೂಜಿಸುತ್ತಿವೆ. ಒಳಭಾಗದ ನವರಂಗದಲ್ಲಿರುವ ಸಮರ್ಪಣಾ ಸ್ತಂಭದ ಮೇಲೆ ಘೇಂಡಾಮೃಗವನ್ನು ಚಿತ್ರಿಸಲಾಗಿದೆ.