ನೀವೊಮ್ಮೆ ದೇವಾಲಯದ ಸುತ್ತಲೂ ನಡೆದು ಬಂದರೆ, ಇಲ್ಲಿ ಹಲವಾರು ವಿಭಿನ್ನ ವಾಸ್ತುಶಿಲ್ಪ ಶೈಲಿಗಳನ್ನು ಕಾಣಬಹುದು. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶವು ಶತಮಾನಗಳಿಂದಲೂ ಅರಸರು ಹಾಗೂ ರಾಜವಂಶಗಳ ಆಳ್ವಿಕೆಗೆ ಒಳಪಟ್ಟಂತೆ, ದೇವಾಲಯವು ಹಲವಾರು ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ಕಂಡಿತು. ದೇವಾಲಯದ ದಿನಾಂಕವನ್ನು ನಿಖರವಾಗಿ ನಿರ್ಧರಿಸಲು ನೆರವಾಗುವಂತಹ ಶಾಸನಗಳು ನಮಗೆ ದೊರೆತಿಲ್ಲ. ಆದರೆ, ಶೈಲಿಯ ಹಾಗೂ ರಚನಾತ್ಮಕ ವಿಶ್ಲೇಷಣೆಯಿಂದ ದೇವಾಲಯವನ್ನು ಮೂರು ಮುಖ್ಯ ಹಂತಗಳಲ್ಲಿ ನಿರ್ಮಿಸಲಾಗಿರುವುದು ತಿಳಿದುಬರುತ್ತದೆ. ವಾಸ್ತುಶಿಲ್ಪದ ಶೈಲಿ ಮತ್ತು ಸಂದರ್ಭದ ಆಧಾರದ ಮೇಲೆ, ಒಳಗಿನ ಗರ್ಭಗುಡಿ, ಮುಖಮಂಟಪ ಮತ್ತು ನವರಂಗ ಮಂಟಪ, 6 ಕಂಬಗಳನ್ನು ಹೊಂದಿರುವ ಸಣ್ಣ ಸಭಾಂಗಣವು, ಸುಮಾರು ಸಾವಿರ ವರ್ಷಗಳ ಹಿಂದೆ ಈ ಪ್ರದೇಶವನ್ನು ಆಳಿದ ಚೋಳರು ನಿರ್ಮಿಸಿರುವರೆಂದು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಡಾ ಎಸ್‌ಕೆ ಅರುಣಿ ಅವರು ಅಂದಾಜು ಮಾಡಿದ್ದಾರೆ. ನಿರ್ಮಾಣದ ಎರಡನೆಯ ಹಂತದಲ್ಲಿ ಸೇರ್ಪಡೆಯಾದ ಕೇಂದ್ರೀಕೃತ ಪಥಕ್ಕೆ ಈ ಮೂಲ ರಚನೆಯು, ಬಹುಷಃ ಅದರ ಹೃದಯ/ನಡುವಿಟ್ಟಳದ ಭಾಗವಾಗಿ ರೂಪುಗೊಂಡಿರುವಂತೆ ತೋರುತ್ತದೆ. ಈ ಪ್ರದಕ್ಷಿಣಾ ಪಥದ ಸೇರ್ಪಡೆಯಿಂದ ನೆಲದ ಮಟ್ಟವು ಎತ್ತರವಾಗಿ, ಮೂಲ ದೇಗುಲದ ಪ್ರನಾಳವನ್ನು (ನೀರಿನ ಚಿಲುಮೆ) ಅದರ ಕೆಳಗೆ ಇರಿಸಿತು. ಇಲ್ಲಿ ಅಂಕಣಗಳು ಒರಟಾಗಿ ರೂಪುಗೊಂಡಿರುವುದನ್ನು ಗಮನಿಸಿ. ಮಹಾ ಮಂಟಪವನ್ನು 1500 ಅಥವಾ 1600ರ ಅವಧಿಯಲ್ಲಿ ನಿರ್ಮಿಸಲಾಗಿದೆ. ವಿವಿಧ ಜ್ಯಾಮಿತಿಗಳೊಂದಿಗೆ ಅದರ ಶ್ರೇಣೀಕೃತ ಕಲ್ಲಿನ ಸ್ತಂಭಗಳು ವಿಜಯನಗರ ಕಾಲದ ದೇವಾಲಯಗಳ ವೈಶಿಷ್ಟ್ಯಗಳನ್ನು ಹೊಂದಿದೆ. ಡಾ ಎಸ್‌ಕೆ ಅರುಣಿ ಅವರ ಪ್ರಕಾರ, ಇದೇ ಅವಧಿಯಲ್ಲಿ ನವರಂಗ ಮಂಟಪದಲ್ಲಿ ಕೆಲವು ನವೀಕರಣಗಳನ್ನು ಕೈಗೊಳ್ಳಲಾಗಿದ್ದು, ಅಲ್ಲಿನ ಮೂಲ ಸ್ತಂಭಗಳನ್ನು ಈಗ ಕೆತ್ತಿದ ಹಾಗೂ ಅಲಂಕರಿಸಿದ ಕಂಬಗಳೊಂದಿಗೆ ಬದಲಾಯಿಸಲಾಯಿತು. ದೇವಾಲಯದ ಸಂಕೀರ್ಣಕ್ಕೆ ಭವ್ಯತೆಯ ಭಾವವನ್ನು ನೀಡುವ ಕಲ್ಯಾಣಿ ಮತ್ತು ಗೋಪುರಗಳೂ ಕೂಡ ಅದೇ ಅವಧಿಯದ್ದಾಗಿರಬಹುದು.