Rotate your device!

ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಶಿವ ಗಾಂಭೀರ್ಯದಲ್ಲಿ ಕುಳಿತಿರುವುದರೊಂದಿಗೆ ಕಥೆಯು ಪ್ರಾರಂಭವಾಗುತ್ತದೆ. ಭೂಮಿಯ ಮತ್ತು ಅದರ ಜೀವಿಗಳ ಪುನರುತ್ಥಾನಕ್ಕಾಗಿ/ಪುನರುಜ್ಜೀವನಕ್ಕಾಗಿ, ಶಿವನೊಂದಿಗೆ ಪಾರ್ವತಿಯ ವಿವಾಹವನ್ನು ಏರ್ಪಡಿಸಲು ನಾಲ್ಕು ಮುನಿಗಳು ಅವರನ್ನು ವಿನಂತಿಸುತ್ತಾರೆ. ನಾವು ಮೂಲೆಯೊಂದರೆಡೆ ತಿರುಗಿದಂತೆ, ಬ್ರಹ್ಮ, ವಿಷ್ಣು, ಶಿವ ಮತ್ತು ಬಹುಶಃ ಐದು ತಲೆಯ ಶಿವನ ರೂಪವಾದ ಮಹೇಶ್ವರರು ತಮ್ಮತಮ್ಮ ವಾಹನಗಳ ಮೇಲೆ ಮದುವೆಗೆ ತೆರಳುತ್ತಿರುವುದು ಹಾಗೂ ಇಬ್ಬರು ತಪಸ್ವಿಗಳು ಅವರನ್ನು ಬರಮಾಡಿಕೊಳ್ಳುತ್ತಿರುವುದು ನಮಗೆ ಕಾಣಿಸುತ್ತದೆ.

ಮುಂದಿನ ಐದು ವಿಗ್ರಹ/ಆಕೃತಿಗಳು ಅತ್ಯಂತ ಅಸಾಮಾನ್ಯ ಸ್ತಬ್ಧಚಿತ್ರವನ್ನು ರೂಪಿಸುತ್ತವೆ. ಮಹೇಶ್ವರನು ತೂಕದ ಯಂತ್ರವನ್ನು ಹಿಡಿದು, ಶಿವ-ಪಾರ್ವತಿಯರ ಮದುವೆಗೆಂದು ಹಿಮಾಲಯಕ್ಕೆ ಎಲ್ಲರೂ ಹೋಗುತ್ತಿರುವುದರಿಂದ, ಭೂಮಿಯ ಸಮತೋಲನವು ಬದಲಾಗಿರುವುದನ್ನು ಅಗಸ್ತ್ಯ ಮಹರ್ಷಿಗೆ ವಿವರಿಸುತ್ತಾನೆ, ಭೂಮಿಯ ಸಮತೋಲನವನ್ನು ಪುನಃಸ್ಥಾಪಿಸಲು, ಮಹೇಶ್ವರನು ಅಗಸ್ತ್ಯನನ್ನು ವಿಂಧ್ಯದ ದಕ್ಷಿಣ ಭಾಗಕ್ಕೆ ಹೋಗಲು ವಿನಂತಿಸುತ್ತಾನೆ. ಮಹರ್ಷಿಯು ಬಯಸಿದಾಗಲೆಲ್ಲ, ಮದುವೆ ಸಮಾರಂಭವನ್ನು ವೀಕ್ಷಿಸುವ ವರವನ್ನು ಶಿವನು ಅವನಿಗೆ ನೀಡುತ್ತಾನೆ.

ಸ್ವಲ್ಪ ಮುಂದೆ ಹೋದರೆ, ನಾರದ ಹಾಗೂ ಕುದುರೆಯ ತಲೆಯ ತುಂಬುರುವಿನಿಂದ ಪ್ರಾರಂಭವಾಗುವ ಮದುವೆಯ ಅತಿಥಿಗಳನ್ನು ನಾವು ಕಾಣಬಹುದು, ನಂತರ ಏಳು ಸಪ್ತಋಷಿಗಳು, ಸೂರ್ಯ ಚಕ್ರದ ಪ್ರಭಾವಳಿಯನ್ನು ಹಾಗೂ ಎಡಗೈಯಲ್ಲಿ ಒಂಟಿ ಕಮಲವನ್ನು ಹಿಡಿದ ಹನ್ನೆರಡು ಆದಿತ್ಯರು, ಪ್ರತಿಯೊಬ್ಬರೂ ತ್ರಿಶೂಲವನ್ನು ಹಿಡಿದ ಹನ್ನೊಂದು ರುದ್ರರು, ಮತ್ತು ಎಂಟು ಸಿದ್ಧರ (ಶೈವ ಸಂತರು) ಗುಂಪನ್ನು ನಾವು ಕಾಣಬಹುದು. ಹೊಗಳಿಕೆಯ ದ್ಯೋತಕವಾಗಿ, ಎಲ್ಲರೂ ತಮ್ಮ ಬಲಗೈಯನ್ನು ಎತ್ತಿದ್ದಾರೆ. ನಮ್ಮ ಪ್ರದಕ್ಷಿಣೆಯಲ್ಲಿ ಮುಂದುವರಿಯುತ್ತಿರುವಂತೆ, ಉತ್ತರದ ಗೋಡೆಯ ಮೇಲೆ ತ್ರಿಶೂಲವನ್ನು ಹೊತ್ತಿರುವ ಈಶನನಿಂದ ಪ್ರಾರಂಭವಾಗಿ, ಸಿಡಿಲನ್ನು ಹೊತ್ತಿರುವ ಇಂದ್ರನಲ್ಲಿ ಕೊನೆಗಾಣುವ ಅಷ್ಟದಿಕ್ಪಾಲಕರನ್ನು ಕಾಣುತ್ತೇವೆ, ಇಂದ್ರನ ಪಕ್ಕದಲ್ಲಿ ಆಶೀರ್ವಾದ ಮತ್ತು ಪ್ರಶಂಸೆಯ ಔಪಚಾರಿಕ ಭಂಗಿಯಲ್ಲಿ ವಿಷ್ಣುವು ನಿಂತಿದ್ದಾನೆ.

ಯಜ್ಞದ ಬೆಂಕಿಗೆ ತುಪ್ಪವನ್ನು ಅರ್ಪಿಸುತ್ತ, ಸಮಾರಂಭದಲ್ಲಿ ಬ್ರಹ್ಮನು ಪುರೋಹಿತನಾಗಿ ಕಾರ್ಯನಿರ್ವಹಿಸುತ್ತಾನೆ. ನಾಜೂಕು ಆಕಾರದ ಪಾರ್ವತಿಯ ಮೇಲೆ, ಆಭರಣಗಳಿಂದ ಅಲಂಕೃತನಾದ ಸುಂದರವಾದ ಶಿವನು ಆವರಿಸಿದಂತಿದೆ. ಪರ್ವತಗಳ ರಾಜನಾದ ಆಕೆಯ ತಂದೆ ಹಿಮವಾನ್, ವಧುವಿನ ಕನ್ಯಾದಾನವನ್ನು ಸಂಪೂರ್ಣಗೊಳಿಸಲು, ಶಿವನ ಚಾಚಿದ ಕೈಯ ಮೇಲೆ ಪವಿತ್ರ ನೀರನ್ನು ಸುರಿಯುತ್ತಾರೆ. ಶಿವ-ಪಾರ್ವತಿಯರ ಕೈಯಿಂದ ಹರಿದ ನೀರು ಕಾದಿರುವ ನಂದಿಯ ಬಾಯನ್ನು ಸೇರುತ್ತದೆ. ಹಿಮವಂತನ ಪಕ್ಕದಲ್ಲಿ ನಿಂತ ಅವನ ಹೆಂಡತಿ ಮೇನಾ. ಮದುವೆಯ ಉಡುಗೊರೆಗಳ ತಟ್ಟೆಯನ್ನು ಹಿಡಿದಿದ್ದಾಳೆ. ಮೇನಾಳ ಎಡಭಾಗದಲ್ಲಿ ಏಳು ಮಾತೃ ದೇವತೆಗಳು ಅಥವಾ ಸಪ್ತಮಾತೃಕೆಯರು ಕಬ್ಬಿನ ಕಾಂಡಗಳನ್ನು ಹಿಡಿದು ನಿಂತಿದ್ದಾರೆ. ಮೂರು ತಲೆಯುಳ್ಳ ಬ್ರಾಹ್ಮಣಿಯನ್ನೂ, ಮತ್ತು ಹಂದಿಯ/ವರಾಹದ ಮುಖವನ್ನು ಹೊಂದಿರುವ ವಾರಾಹಿಯನ್ನು ನೀವು ಸುಲಭವಾಗಿ ಗುರುತಿಸಬಹುದು.

ಕಥೆಯು ಬಹುತೇಕ ಪ್ರಾರಂಭವಾದ ರೀತಿಯಲ್ಲೇ ಕೊನೆಗೊಳ್ಳುತ್ತದೆ. ಮಹೇಶ್ವರ, ಬ್ರಹ್ಮ, ವಿಷ್ಣು ಮತ್ತು ನವವಿವಾಹಿತ ದಂಪತಿಗಳ ಮೆರವಣಿಗೆಯನ್ನು ತೋರಿಸುವ ವಿವಾಹದ ನಂತರದ ಮೆರವಣಿಗೆಯನ್ನು ನಾವು ನೋಡಬಹುದು. ಹಾಗೂ ಕೊನೆಯದಾಗಿ, ಮಹಾನ್ ದೇವರುಗಳಾದ ಮಹೇಶ್ವರ, ಬ್ರಹ್ಮ, ವಿಷ್ಣು ಮತ್ತು ರುದ್ರ-ಶಿವ ಗಾಂಭೀರ್ಯದಿಂದ ಕುಳಿತಿದ್ದಾರೆ. ಒಂದೇ ವ್ಯತ್ಯಾಸವೆಂದರೆ, ಶಿವನ ಜೋಡಿ/ಉಭಯ ಸಿಂಹಾಸನದಲ್ಲಿ, ಆತನ ಸುಂದರ ನವವಧುವಾದ ಪಾರ್ವತಿಯೂ ಪಕ್ಕದಲ್ಲಿ ಕುಳಿತಿದ್ದಾಳೆ.

ಗಿರಿಜಾ ಕಲ್ಯಾಣ

ಗಿರಿಜಾ ಎಂದೂ ಕರೆಯಲ್ಪಡುವ ಶಿವ ಮತ್ತು ಪಾರ್ವತಿಯ ವಿವಾಹವನ್ನು ಚಿತ್ರಿಸುವ ಶಿಲ್ಪಗಳು ಬೆಂಗಳೂರು ಪ್ರದೇಶದ ಹಲವಾರು ದೇವಾಲಯಗಳಲ್ಲಿ ಕಂಡುಬರುತ್ತವೆ. ಇಲ್ಲಿ, ಕಾಮಾಕ್ಷಿ ದೇಗುಲದ ಬಾಹ್ಯ ಗೋಡೆಯನ್ನು ಸುತ್ತುವರೆದ, ಜೀವಂತಿಕೆಯಿಂದ ಕೂಡಿದ ಉಬ್ಬುಚಿತ್ರಣ ಫಲಕದಲ್ಲಿ ಕಥೆಯನ್ನು ನಿರೂಪಿಸಲಾಗಿದೆ. ನಿರಂತರ ನಿರೂಪಣೆಯ ವಿಗ್ರಹ/ಆಕೃತಿಗಳನ್ನು ಕಣ್ಣಿನ ಮಟ್ಟದಲ್ಲಿ ಇರಿಸಲಾಗಿದೆ ಮತ್ತು ಕಥೆಯನ್ನು ಪ್ರದಕ್ಷಿಣಾಕಾರ ರೂಪದಲ್ಲಿ ಓದಬೇಕು.