ವಿಷ್ಣುವು ಎಲ್ಲೆಡೆ ಇರುವನೆಂದೂ, ಎಲ್ಲವನ್ನೂ ವ್ಯಾಪಿಸಿರುವನೆಂದೂ ಬಾಲ ಭಕ್ತ ಪ್ರಹ್ಲಾದನು ಪಟ್ಟು ಹಿಡಿದಾಗ, ಕ್ರೋಧಗೊಂಡ ಅವನ ಶಕ್ತಿಶಾಲಿ ರಾಕ್ಷಸ ತಂದೆ, ಹಿರಣ್ಯಕಶಿಪುವು, ಒಂದು ಕಂಭದವನ್ನು ತೋರಿಸಿ, ಈ ಕಂಭದಲ್ಲಿ ನಿಮ್ಮ ವಿಷ್ಣು ಇದ್ದಾನೆಯೇ? ಎಂದು ಕೇಳುತ್ತಾನೆ. ಪ್ರಹ್ಲಾದನು ಶಾಂತವಾಗಿ ಉತ್ತರಿಸುತ್ತ, ಅವನು ಕಂಭದಲ್ಲಿ ಮಾತ್ರವಲ್ಲ, ಅತ್ಯಂತ ಪುಟ್ಟ ರೆಂಬೆಯಲ್ಲೂ ಇದ್ದಾನೆ, ಎನ್ನುತ್ತಾನೆ.

ಗೋಪುರದ ಮೇಲಿನ ಶಿಲ್ಪ ಫಲಕದಲ್ಲಿ ಹಿರಣ್ಯಕಶಿಪುವು ಮರದಂತಹ ಕಂಭವನ್ನು ಒದೆಯುತ್ತಿರುವುದನ್ನು ತೋರಿಸಲಾಗಿದೆ, ಈ ಕಂಭವು ಸ್ಫೋಟಗೊಂಡು, ಅದರಿಂದ ಕೋಪೋದ್ರಿಕ್ತನಾದ, ಘರ್ಜಿಸುತ್ತಿರುವ ಸಿಂಹ-ಮಾನವ ಆಕಾರದ ನರಸಿಂಹನು ಹೊರಹೊಮ್ಮುತ್ತಾನೆ. ಪ್ರಹ್ಲಾದನು ನರಸಿಂಹನ ಎಡಭಾಗದಲ್ಲಿ ಪೂಜಿಸುವ ಭಂಗಿಯಲ್ಲಿ ನಿಂತಿದ್ದಾನೆ.

ಕೆಳಗಿನ ಫಲಕದಲ್ಲಿ ನರಸಿಂಹನು ಕಂಭದಿಂದ ಹೊರಬಂದು ಯುದ್ಧ ಸನ್ನದ್ಧನಾಗುತ್ತಿದ್ದಂತೆ, ರಾಕ್ಷಸ ರಾಜನು ಅವನಿಗೆ ಸವಾಲು ಹಾಕುವ ಚಿತ್ರಣವಿದೆ.

ಮುಂದಿನ ಫಲಕದಲ್ಲಿ, ಹಿರಣ್ಯಕಶಿಪು ನರಸಿಂಹನೊಂದಿಗೆ ಕುಸ್ತಿಯಾಡುತ್ತಿದ್ದರೆ, ಪ್ರಾರ್ಥನೆಯಲ್ಲಿ ಕರ ಮುಗಿದು ನಿಂತ ಪ್ರಹ್ಲಾದನು ಅದನ್ನು ನೋಡುತ್ತಾ ನಿಂತಿದ್ದಾನೆ.

ಪ್ರಹ್ಲಾದನು ತನ್ನ ರಕ್ಷಕನಿಗೆ ಪ್ರಾರ್ಥಿಸುತ್ತಿರುವಂತೆ, ನರಸಿಂಹನು ಹಿರಣ್ಯಕಶಿಪುವಿನ ಕರುಳನ್ನು ಬಗೆದು ಹೊರಹಾಕುತ್ತಿರುವ ಕಥನವನ್ನು ಅತ್ಯಂತ ತಳಮಟ್ಟದ ಫಲಕದಲ್ಲಿ ತೋರಿಸಲಾಗಿದೆ.

ನರಸಿಂಹ ಮತ್ತು ಹಿರಣ್ಯಕಶಿಪು

ವಿಷ್ಣುವಿನ ಮನುಷ್ಯ-ಸಿಂಹ ಅವತಾರವಾದ ನರಸಿಂಹನ ಕಥೆಯನ್ನು ದೇವಾಲಯದ ಗೋಪುರದ ಪಶ್ಚಿಮ (ಒಳ) ಮುಖದ ಮೇಲೆ ಚಿತ್ರಿಸಲಾಗಿದೆ, ಇದನ್ನು ಮೇಲಿನಿಂದ ಕೆಳಕ್ಕೆ ಓದಬಹುದು. ಆಕೃತಿಗಳನ್ನು ಗಾರೆ/ಸಿಮೆಂಟ್‌ನಿಂದ ಮಾಡಲಾಗಿದ್ದು, ಗಾಢವಾದ ಬಣ್ಣಗಳಲ್ಲಿ ಚಿತ್ರಿಸಲಾಗಿದೆ.